ಪೋರ್ಚುಗೀಸರು, ಭಾರತದಲ್ಲಿ 
 
ಸಮುದ್ರ ಮಾರ್ಗವಾಗಿ ಗುಡ್ ಹೋಪ್ ಭೂಶಿರವನ್ನು ಬಳಸಿ ಭಾರತಕ್ಕೆ ಬಂದ ಪ್ರಥಮ ಯೂರೋಪಿಯನ್ ವ್ಯಾಪಾರಿಗಳು ಪೋರ್ಚುಗೀಸರು. ಅವರಲ್ಲಿ ಮೊದಲಿಗರು ವ್ಯಾಸ್ಕೋಡಗಾಮನ ನಾಯಕತ್ವದಲ್ಲಿ ನಾಲ್ಕು ಹಡಗುಗಳಲ್ಲಿ 1498ರ ಮೇ 20 ರಂದು ಬಂದು ಮಲಬಾರ್ ಪ್ರದೇಶದ ದೊರೆ ಜಾಮೊರಿನ್ನನ ಔದಾರ್ಯದಿಂದಾಗಿ ಕಲ್ಲಿಕೋಟೆಯ ಬಳಿಯಲ್ಲಿ ಭಾರತದ ನೆಲದ ಮೇಲೆ ಕಾಲಿಟ್ಟರು. ಅವರು ಕೊಚ್ಚಿ ಮತ್ತು ಕಣ್ಣನ್ನೂರಿಗೂ ಭೇಟಿ ನೀಡಿ ಸುಖವಾಗಿ ಪೋರ್ಚುಗಲ್ಲಿಗೆ ಹಿಂದಿರುಗಿದರು. ಅವರು ಭಾರತಕ್ಕೆ ಬಂದ ಕಾಲ ಅನುಕೂಲಕರವಾಗಿತ್ತು. ಉತ್ತರ ಭಾರತದಲ್ಲಿ ದೆಹಲಿಯ ಸುಲ್ತಾನರ ಆಳ್ವಿಕೆ ದುರ್ಬಲವಾಗಿತ್ತು. ದಕ್ಷಿಣದಲ್ಲಿ ಬಹುಮನಿ ರಾಜ್ಯಗಳ ಪ್ರಭಾವ ಪ್ರಾಬಲ್ಯಗಳು ಹೊಂದುತ್ತಿದ್ದುವು. ಭಾರತದಲ್ಲಿ ಹೇಳಿಕೊಳ್ಳುವಂಥ ಪ್ರಬಲ ರಾಜ್ಯ ಯಾವುದೂ ಇರಲಿಲ್ಲ. ಸಮುದ್ರದ ಮೂಲಕ ಬಂದ ವಿದೇಶಿಯರನ್ನು ಎದುರಿಸಬಲ್ಲ ನೌಕಾಸಾಮಥ್ರ್ಯ ಯಾವ ರಾಜ್ಯಕ್ಕೂ ಇರಲಿಲ್ಲ. ಪೋರ್ಚುಗೀಸರಿಗೆ ಅಡ್ಡಿಯಾಗಿದ್ದವರೆಂದರೆ ಅರಬ್ ವ್ಯಾಪಾರಿಗಳು. ಪಾಶ್ಚಾತ್ಯ ದೇಶಗಳೊಂದಿಗೆ ಭಾರತದ ವ್ಯಾಪಾರ ಅವರ ಹಿಡಿತದಲ್ಲಿತ್ತು.

1502ರಲ್ಲಿ ವ್ಯಾಸ್ಕೋಡಗಾಮ ಮತ್ತೆ ಭಾರತಕ್ಕೆ ಬಂದ. ಅರಬ್ ವ್ಯಾಪಾರಿಗಳನ್ನು ದೂರ ಇಟ್ಟು, ಪೋರ್ಚುಗೀಸರಿಗೆ ವ್ಯಾಪಾರದ ಏಕಸ್ವಾಮ್ಯವನ್ನು ನೀಡಬೇಕೆಂಬುದು ಜಾಮೊರಿನ್ ದೊರೆಗೆ ಪೋರ್ಚುಗೀಸರ ಬೇಡಿಕೆಯಾಗಿತ್ತು. ದೊರೆ ಇದಕ್ಕೆ ಒಪ್ಪದ್ದರಿಂದ ಪೋರ್ಚುಗೀಸರೊಂದಿಗೆ ವಿರಸ ಬೆಳೆಯಿತು. ಆದರೆ ಭಾರತದೊಂದಿಗೆ ಪೋರ್ಚುಗೀಸರ ವ್ಯಾಪಾರವೂ ಬೆಳೆಯುತ್ತಿತ್ತು. 1505ರಲ್ಲಿ ಪ್ರಥಮ ಪೋರ್ಚುಗೀಸ್ ವೈಸ್‍ರಾಯಿಯಾಗಿ ಫ್ರಾನ್ಸಿಪ್ಕೂದೆ ಆಲ್ಮೇಯಿದ (1450 ? - 1510) ನೇಮಕವಾದ. ಅರಬ್ಬಿ ಸಮುದ್ರದಲ್ಲಿ ಪೋರ್ಚುಗೀಸ್ ನೌಕೆಗೂ ಈಜಿಪ್ಟ್ ಮತ್ತು ಗುಜರಾತಿ ಸಂಯುಕ್ತ ನೌಕಾಬಲಕ್ಕೂ ನಡೆದ ಕದನದಲ್ಲಿ ಪೋರ್ಚುಗೀಸರು ಗೆದ್ದರು. ಸಮುದ್ರದಲ್ಲಿ ಪೋರ್ಚುಗೀಸರ ಕೈ ಮೇಲಾಯಿತು. ಅನಂತರ ಪೋರ್ಚುಗೀಸ್ ಗವರ್ನರ್ ಆಗಿ ಬಂದವನು ಆಲ್ಬುಕರ್ಕ್. ಭಾರತದಲ್ಲಿ ಪೋರ್ಚುಗೀಸ್ ಆಳ್ವಿಕೆಗೆ ಇವನು ಅಸ್ತಿಭಾರ ಹಾಕಿದ. ಪಶ್ಚಿಮದಿಂದ ಹಿಂದೂ ಸಾಗರ ಪ್ರದೇಶಕ್ಕೆ ಬರುವ ಎಲ್ಲ ಸಮುದ್ರ ಮಾರ್ಗಗಳ ಮೇಲೂ ಪೋರ್ಚುಗೀಸರು ಹಿಡಿತ ಸ್ಥಾಪಿಸಿದರು. ಅರಬ್ ನೌಕಾಬಲ ಕುಗ್ಗಿತು. ಬಹುಕಾಲ ಭಾರತದಲ್ಲಿ ಗವರ್ನರ್ ಆಗಿದ್ದ ಈತ ಗೋವೆಯನ್ನು ಗೆದ್ದು ಪೋರ್ಚುಗೀಸ್ ಧ್ವಜವನ್ನು ಅಲ್ಲಿ ಏರಿಸಿದ. ಪೋರ್ಚುಗೀಸರ ಆಳ್ವಿಕೆಯನ್ನು ಸುಭದ್ರವಾಗಿರಿಸಲು ಸಕಲ ಸನ್ನಾಹಗಳನ್ನು ನಡೆಸಿ ಅಲ್ಲಿಯ ನಿವಾಸಿಗಳ ವಿಶ್ವಾಸ ಸಂಪಾದಿಸಲು ಉದ್ಯುಕ್ತನಾದ. ಆದರೆ, ಮುಸಲ್ಮಾನರ ಮೇಲೆ ಅವನಿಗೆ ಕ್ರೋಧವಿತ್ತು. ಅವರು ಪಶ್ಚಿಮ ತೀರದ ವ್ಯಾಪಾರವನ್ನೆಲ್ಲ ತಮ್ಮ ಕೈಯ್ಯಲ್ಲಿಟ್ಟು ಕೊಂಡಿದ್ದರೆಂಬುದೇ ಈ ಕ್ರೋಧಕ್ಕೆ ಕಾರಣ. 

ಗೋವೆಯ ಮೇಲೆ ಆಲ್ಬುಕರ್ಕ್ ಮೊದಲನೆಯ ಸಲ ದಂಡೆತ್ತಿ ಬಂದಾಗ ಪ್ರತಿಭಟನೆ ಬಹಳವಿದ್ದರಿಂದ ಅವನ ಯತ್ನ ಫಲಿಸಲಿಲ್ಲ. ತರುವಾಯ ಅವನು ಸಮಯ ಕಾಯುತ್ತಿದ್ದ. ಸ್ಥಳೀಯ ಪ್ರಮುಖನೊಬ್ಬನ ನೆರವಿನಿಂದ ಮತ್ತೊಮ್ಮೆ ಆಕ್ರಮಣದ ಪ್ರಯತ್ನ ನಡೆಸಿದ. ಆ ಕಾಲಕ್ಕೆ ಗೋವೆ ಬಿಜಾಪುರದ ಮುಸ್ಲಿಂ ದೊರೆ ಇಸ್ಮಾಯಿಲ್ ಆದಿಲ್ ಶಾಹನ ಆಳ್ವಿಕೆಗೆ ಒಳಪಟ್ಟಿತು. ಆ ಆಕ್ರಮಣ ಪ್ರಯತ್ನದಲ್ಲಿ ಆಲ್ಬುಕರ್ಕ್‍ನಿಗೆ ವಿಜಯ ದೊರಕಿತು. 1510 ರ ಅಂತ್ಯದಲ್ಲಿ ಗೋವೆ ಸಂಪೂರ್ಣವಾಗಿ ಅವನ ವಶವಾಗಿಬಿಟ್ಟಿತು. ಅಲ್ಲಿಯ ಮುಸಲ್ಮಾನರು ತಮಗೆ ದ್ರೋಹ ಬಗೆದರೆಂದು ಅವರನ್ನು ಆಲ್ಬುಕರ್ಕ್ ನಿಷ್ಕರುಣೆಯಿಂದ ಕೊಂದು ಊರನ್ನು ಲೂಟಿ ಮಾಡಿದನಲ್ಲದೆ ಕೋಟೆ ಕೊತ್ತಲಗಳನ್ನು ಸರಿಪಡಿಸಿ ಭದ್ರಪಡಿಸಿದ. ಆ ಆಕ್ರಮಣ ಕಾರ್ಯದಲ್ಲಿ ಅವನಿಗೆ ಪೋರ್ಚುಗೀಸ್ ದೊರೆಯ ಬೆಂಬಲ ಸಹಾಯಗಳಿದ್ದವು. 

ಹಿಂದೆ ವಿಜಯನಗರದ ಅರಸರ ಅಧೀನದಲ್ಲಿದ್ದು ಬಹುಮನಿ ಸುಲ್ತಾನನ ವಶಕ್ಕೆ ಹೋಗಿದ್ದ ಗೋವೆಯನ್ನು ಮತ್ತೆ ಗೆದ್ದುಕೊಳ್ಳಬೇಕೆಂದು ವಿಜಯನಗರ ದೊರೆ ಕೃಷ್ಣದೇವರಾಯ ಯೋಚಿಸಿದ. ಅಷ್ಟರಲ್ಲಿ ಪೋರ್ಚುಗೀಸರು ಇದನ್ನು ಆಕ್ರಮಿಸಿಕೊಂಡರಾದ್ದರಿಂದ ಕೃಷ್ಣದೇವರಾಯನ ಉದ್ದೇಶ ಫಲಿಸಲಿಲ್ಲ. ಆದರೂ ಅವನು ಪೋರ್ಚುಗೀಸರ ವಿರೋಧ ಕಟ್ಟಿಕೊಳ್ಳಲಿಲ್ಲ. ಕೃಷ್ಣದೇವರಾಯನ ದಂಡಯಾತ್ರೆಗಳಿಗೆ ಪೋರ್ಚುಗೀಸರಿಂದ ಸಾಮಾನು ಸರಂಜಾಮುಗಳ ರೂಪದಲ್ಲಿ ನೆರವು ಅವಶ್ಯವಾಗಿತ್ತು. ಆದ್ದರಿಂದ ಅವರೊಡನೆ ಸಖ್ಯ ಬೆಳೆಸಿದ. ಗೋವೆಯಲ್ಲಿ ಪೋರ್ಚುಗೀಸರು ನೆಲೆಯೂರಲು ಇದು ಸಹಾಯಕವಾಯಿತು. 

ಪೋರ್ಚುಗೀಸರು ಗೋವೆಯನ್ನು ಆಕ್ರಮಿಸಿಕೊಂಡ ಮೇಲೆ ಅಲ್ಲಲ್ಲಿದ್ದ ಸಣ್ಣಪುಟ್ಟ ಪಾಳೆಯ ಪಟ್ಟಿನವರೊಡನೆ ಸ್ನೇಹ ಸಂಪಾದಿಸಿ, ವ್ಯಾಪಾರಕ್ಕೆ ಅವರಿಂದ ಅನೇಕ ರಿಯಾಯಿತಿಗಳನ್ನು ಪಡೆದು, ಕಡೆಗೆ ಆ ಪ್ರದೇಶಗಳನ್ನು ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡರು. ಹೀಗೆ ಅವರು ಎರಡು ಶತಮಾನಗಳಲ್ಲಿ ತಮ್ಮ ಆಳ್ವಿಕೆಯನ್ನು ವಿಸ್ತರಿಸಿ ಬೇರು ಬಿಟ್ಟರು.
 
ಪೋರ್ಚುಗೀಸರ ಆಳ್ವಿಕೆ ಕೇವಲ ಗೋವೆಗೆ ಸೀಮಿತವಾಗಲಿಲ್ಲ. ಅವರು ಪಶ್ಚಿಮ ತೀರದ ರಾಜರುಗಳ ಸ್ನೇಹ ವಿಶ್ವಾಸಗಳನ್ನು ಗಳಿಸಿದ್ದರು. ಅವರ ಪ್ರಭಾವ ಅತ್ತ ಕಡೆಯೂ ಹಬ್ಬಿತು. ಅಹಮದಾಬಾದಿನ ಮುಸ್ಲಿಂ ದೊರೆ ತನ್ನ ರಾಯಭಾರಿಯನ್ನು ಆಲ್ಬುಕರ್ಕನಲ್ಲಿಗೆ ಕಳುಹಿಸಿ ಸ್ನೇಹ ಹಸ್ತ ನೀಡಿದ. ಅದು ತನಕ ವೈರಿ ಎನಿಸಿದ್ದ ಕಲ್ಲಿಕೋಟೆಯ ಜಾಮೊರಿನ್ ಸಹ ಸ್ನೇಹಕ್ಕಾಗಿ ಕಾತರನಾದ. ಆದರೆ, ಆಲ್ಬುಕರ್ಕನ ಷರತ್ತುಗಳಿಗೆ ಜಾಮೊರಿನ್ ಒಪ್ಪದಿದ್ದುದರಿಂದ ಸ್ನೇಹ ಸಂಧಾನ ಮುರಿದುಬಿತ್ತು. 
ವ್ಯಾಪಾರದ ಹೆಸರಿನಲ್ಲಿ ಪೋರ್ಚುಗೀಸ್ ಆಡಳಿತ ಮುಖಂಡರು ಬಂಗಾಲದತ್ತ ಸಹ ತಮ್ಮ ದೃಷ್ಟಿಯನ್ನು ಹೊರಳಿಸಿ, ಚಿತ್ತಗಾಂಗ್, ಹೂಗ್ಲಿ ಮುಂತಾದೆಡೆಗಳಲ್ಲಿ ಕೋಠಿಗಳನ್ನು ಸ್ಥಾಪಿಸಿದರು; ಬಂಗಾಳದ ದೊರೆಯೊಡನೆ ಸಖ್ಯ ಬೆಳೆಸಿದರು. ಮುಸ್ಲಿಂ ರಾಜರ ಹಾಗೂ ತುರ್ಕಿಯ ಆಕ್ರಮಣವನ್ನು ತಡೆಗಟ್ಟುವ ಉದ್ದೇಶದಿಂದ ಗುಜರಾತಿನಲ್ಲಿ ಬಲವತ್ತವಾದ ಕೋಟೆಯನ್ನು ನಿರ್ಮಿಸಬೇಕೆಂಬ ಆಸೆ ಪೋರ್ಚುಗೀಸ್ ಆಡಳಿತಗಾರರಲ್ಲಿ ಉಂಟಾಯಿತು. ಗುಜರಾತಿನ ದೊರೆ ಬಹಾದೂರ್ ಶಾಹ ಬೇಸಿನ್ ದ್ವೀಪವನ್ನು ಪೋರ್ಚುಗೀಸರಿಗೆ ದಾನ ಮಾಡಿದ. ಇದು ಮುಂದೆ ಪೋರ್ಚುಗೀಸರ ಉತ್ತರದ ರಾಜಧಾನಿಯಾಯಿತು. ಇಲ್ಲಿ ಅವರು ಕೋಟೆಯನ್ನು ನಿರ್ಮಿಸಿದರು. ಜೊತೆಗೆ ದಿಯು ಎಂಬ ಸ್ಥಳದ ಮೇಲೆ ಕಣ್ಣಿಟ್ಟು, ಅದನ್ನೂ ಬಹಾದ್ದೂರ್ ಶಾಹನಿಂದ ಪಡೆದು, ಅಲ್ಲೂ ಪೋರ್ಚುಗೀಸರು ಕೋಟೆ ಕಟ್ಟಿ ಸೇನೆಯನ್ನಿಟ್ಟರು. ಆದರೆ, ಪೋರ್ಚುಗೀಸರಿಗೆ ದಿಯು ಸುರಕ್ಷಿತವಾಗಿರಲಿಲ್ಲ. ತುರ್ಕಿ ಸೇನೆ ಸಮುದ್ರದ ಮೂಲಕವೂ ಗುಜರಾತಿನ ದೊರೆ 3 ನೆಯ ಮಹಮದ್ ಭೂಮಿಯ ಮೂಲಕವೂ ಅದಕ್ಕೆ ಮುತ್ತಿಗೆ ಹಾಕಿದರು. ಪೋರ್ಚುಗೀಸ್ ಸೇನೆ ಈ ಮುತ್ತಿಗೆಯನ್ನು ಪ್ರತಿಭಟಿಸಿ ನಿಂತು ಶತ್ರುಗಳು ಪಲಾಯನವಾಗುವಂತೆ ಮಾಡಿ ದಿಯುವನ್ನು ರಕ್ಷಿಸಿತು. ಸ್ವಲ್ಪ ಕಾಲದ ಅನಂತರ ಬಿಜಾಪುರದ ದೊರೆ ಕೆಲವು ಪ್ರದೇಶಗಳನ್ನು ಪೋರ್ಚುಗೀಸರಿಗೆ ಒಪ್ಪಿಸಿದ. ಪೋರ್ಚುಗೀಸರು ತಮ್ಮ ಪ್ರದೇಶಗಳನ್ನು ಬಲಪಡಿಸಿಕೊಳ್ಳುತ್ತಿದ್ದರೂ ಹೊರಗಿನ ದಾಳಿಯ ಭಯ ತಪ್ಪಲಿಲ್ಲ. ಕೆಲವು ವರ್ಷಗಳ ತರುವಾಯ ಬಿಜಾಪುರದ ಆಲಿ ಅದಿಲ್ ಶಾಹ ಗೋವೆಯ ಮೇಲೆ ಒಂದು ಲಕ್ಷ ಸೈನಿಕರು ಮತ್ತು ಎರಡು ಸಾವಿರ ಆನೆಗಳೊಂದಿಗೆ ದಂಡೆತ್ತಿ ಬಂದ. ಇವನಿಗೆ ಕಲ್ಲಿಕೋಟೆಯ ಜಾಮೊರಿನ್ ದೊರೆಯೇ ಮೊದಲಾದವರು ಸಹಾಯ ನೀಡಿದರು. ಪೋರ್ಚುಗೀಸರಿಗೆ ಮಿತ್ರರಾಗಿದ್ದ ಒಬ್ಬಿಬ್ಬ ಹಿಂದೂ ರಾಜರು ಆಗ ತಿರುಗಿ ಬಿದ್ದರು. ಆಗಂತೂ ಪೋರ್ಚುಗೀಸರಿಗೆ ಬಹಳ ಕಷ್ಟದ ಕಾಲ ಬಂತು. ಹತ್ತು ತಿಂಗಳುಗಳ ಕಾಲ ನಡೆದ ದಾಳಿಯಲ್ಲಿ ಕೊನೆಗೆ ಆದಿಲ್ ಶಾಹ ಪಲಾಯನ ಮಾಡಿದ. ಇವನಿಗೆ ಸಹಾಯ ಮಾಡಿದವರ ಮೇಲೆ ಕ್ರೂರ ರೀತಿಯಲ್ಲಿ ಪೋರ್ಚುಗೀಸರು ಸೇಡು ತೀರಿಸಿಕೊಂಡರು. ಹೀಗೆ ಪೋರ್ಚುಗೀಸರಿಗೆ ಒದಗಿದ್ದ ವಿಪತ್ತು ಪಾರಾಯಿತು. ಆದರೆ, ಅವನತಿಯ ಕಾಲವೂ ಆರಂಭವಾಯಿತು. 

ಡಚ್ಚರ ಮತ್ತು ಇಂಗ್ಲಿಷರ ಪ್ರಾಬಲ್ಯದಿಂದ ಪೋರ್ಚುಗೀಸರ ಆಳ್ವಿಕೆಯ ವರ್ಚಸ್ಸು ಕಂಡಿತು. ಸಮುದ್ರ ಮಾರ್ಗದ ಮೇಲೆ ಅವರ ಹತೋಟಿ ತಪ್ಪತೊಡಗಿತು. 16ನೆಯ ಶತಮಾನದಲ್ಲಿ ಇದು ಆರಂಭವಾಯಿತು. ಡಚ್ಚರು ಗೋವೆಯನ್ನು ಮುತ್ತಿದರು. ಕಣ್ಣನ್ನೂರಿನಿಂದ ಅವರು ಪೋರ್ಚುಗೀಸರನ್ನು ಬಡಿದೆಟ್ಟಿದರು. ಸ್ವಲ್ಪ ಕಾಲದ ಅನಂತರ ಇಂಗ್ಲಿಷರೂ ಪ್ರಬಲರಾಗತೊಡಗಿದರು. ಅವರು ಕ್ಯಾಂಬೆ ಮತ್ತು ಸೂರತ್ತುಗಳನ್ನು ಮುತ್ತಿ ಜಯಗಳಿಸಿದರು. 17ನೆಯ ಶತಮಾನದ ಮಧ್ಯಭಾಗದ ವೇಳೆಗೆ ಪೋರ್ಚುಗಲ್ಲಿನ ಏಷ್ಯ ವ್ಯಾಪಾರ ಕುಸಿಯಿತು. ಮೊಗಲ್ ಚಕ್ರವರ್ತಿ ಶಾಹಜಹಾನ್ ಹೂಗ್ಲಿಯನ್ನು ವಶಪಡಿಸಿಕೊಂಡು ಸಾವಿರಾರು ಪೋರ್ಚುಗೀಸ್ ಸೈನಿಕರನ್ನು ಸೆರೆಹಿಡಿದ. ಮುಂದೆ ಮರಾಠರೂ ಪೋರ್ಚುಗೀಸ್ ಪ್ರದೇಶಗಳನ್ನು ಮುತ್ತಿ ಲೂಟಿ ಮಾಡಿದರು. ಬೇಸಿನ್ನನ್ನು ಕಿತ್ತುಕೊಂಡರು. ಮುಂಬಯಿಯನ್ನು ಪೋರ್ಚುಗೀಸರು ಇಂಗ್ಲಿಷರಿಗೆ ಬಳುವಳಿಯಾಗಿ ಕೊಡಬೇಕಾದ ಪ್ರಸಂಗ ಒದಗಿತು. ಇಷ್ಟೆಲ್ಲ ಏರುಪೇರುಗಳಾದ ಅನಂತರ ಪೋರ್ಚುಗೀಸರಿಗೆ ಉಳಿದ ಪ್ರದೇಶಗಳೆಂದರೆ ಗೋವ, ದಿಯು ಮತ್ತು ಡಾಮನ್. ಇಲ್ಲಿ ಅವರು ಸುಮಾರು 450 ವರ್ಷಗಳ ಕಾಲ ಆಳ್ವಿಕೆ ನಡೆಸಿ, ಆ ಪ್ರದೇಶಗಳಲ್ಲಿ ತಮ್ಮ ಸಂಸ್ಕøತಿ, ಸಂಪ್ರದಾಯಗಳನ್ನು ರೂಢಿಸಲು ಯತ್ನಿಸಿದರು. ದಬ್ಬಾಳಿಕೆ, ದೌರ್ಜನ್ಯ, ಅನ್ಯ ಮತ ದ್ವೇಷ ಮುಂತಾದವು ಅವರ ಆಳ್ವಿಕೆಯ ವೈಶಿಷ್ಟ್ಯಗಳೂ. ಅವರ ಸಂಖ್ಯೆ ಬಹಳ ಕಡಿಮೆಯಿದ್ದುದರಿಂದ ಪೋರ್ಚುಗೀಸ್ ನಾವಿಕರೊಂದಿಗೆ ಸ್ಥಳೀಯ ವಿಧವೆಯರ, ಅಪಹೃತ ಸ್ತ್ರೀಯರ ವಿವಾಹ ಏರ್ಪಡಿಸಲು ಅವರು ಯತ್ನಿಸಿದರು. ಇವರಿಂದ ಹುಟ್ಟಿದವರು ಮುಂದೆ ತಮಗೆ ವಿಧೇಯರಾಗಿರುವರೆಂಬುದು ಅವರ ಕನಸಾಗಿತ್ತು. ಆದರೆ ಅಂಥವರಿಂದ ಅವರಿಗೆ ಹೆಚ್ಚಿನ ಪ್ರಯೋಜನವಾಗಲಿಲ್ಲ. ಭಾರತದಲ್ಲಿ ಪ್ರಬಲರಾದ ಬ್ರಿಟಿಷರು ಫ್ರೆಂಚರನ್ನು ಬಹುತೇಕ ಭಾರತದಿಂದ ಓಡಿಸಿದಂತೆ ಪೋರ್ಚುಗೀಸರನ್ನು ಓಡಿಸಬಹುದಾಗಿತ್ತು. ಆದರೆ, ನೆಪೋಲಿಯನ್ ಯುದ್ಧಗಳಲ್ಲಿ ಪೋರ್ಚುಗಲ್ಲು ಬ್ರಿಟನ್ನಿನ ಮಿತ್ರದೇಶವಾಗಿದ್ದುದರಿಂದ ಗೋವ, ಡಾಮನ್, ದಿಯುಗಳಲ್ಲಿ ಅವರ ಆಳ್ವಿಕೆ ಮುಂದುವರಿಯಿತು.

ಭಾರತ ಸ್ವತಂತ್ರವಾದ ಮೇಲೆ ದೇಶದಲ್ಲಿ ಪೋರ್ಚುಗೀಸರ ಸ್ವಾಸ್ಥ್ಯ ಮುಂದುವರಿಯಗೊಡುವುದು ಸಾಧುವೆನಿಸಲಿಲ್ಲ. ಪೋರ್ಚುಗೀಸ್ ಆಡಳಿತದ ವಿರುದ್ಧ ಅಲ್ಲಿಯ ಜನರ ಚಳುವಳಿ ಪ್ರಬಲವಾಯಿತು. ಪೋರ್ಚುಗೀಸ್ ಪ್ರದೇಶಗಳನ್ನು ಭಾರತಕ್ಕೆ ವಹಿಸಿಕೊಡುವ ಬಗ್ಗೆ ನಡೆದ ಸಂಧಾನಗಳು ಫಲಿಸಲಿಲ್ಲ. ಕೊನೆಗೆ 1960ರಲ್ಲಿ ಭಾರತದ ಸೇನೆ ಈ ಪ್ರದೇಶಗಳನ್ನು ವಿಮೋಚನೆಗೊಳಿಸಿತು.
(ಕೆ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ